Headlines

9 ತಿಂಗಳಿಂದ ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳದ ಮೃಣಾಲ್ ಠಾಕೂರ್

9 ತಿಂಗಳಿಂದ ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳದ ಮೃಣಾಲ್ ಠಾಕೂರ್


ಸೈನ್ಸ್ ಫಿಕ್ಷನ್ ಕಥಾಹಂದರದ ‘ರಾಕಾ’ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಸ್ಟಾರ್ ನಿರ್ದೇಶಕ ಅಟ್ಲೀ ಅವರ ಈ ಚಿತ್ರದಲ್ಲಿ ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸ್ಟಾರ್ ಜೋಡಿಯ ಜೊತೆಗೆ ನಟಿ ಮೃಣಾಲ್ ಠಾಕೂರ್ ಕೂಡ ಈ ಚಿತ್ರದ ತಾರಾಗಣದಲ್ಲಿದ್ದಾರೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಕುರಿತು ಸ್ವತಃ ನಟಿ ಮೃಣಾಲ್ ಇತ್ತೀಚಿನ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ.

‘ರಾಕಾ’ ಚಿತ್ರದ ಬಗ್ಗೆ ಹಬ್ಬಿರುವ ವದಂತಿಗಳ ಬಗ್ಗೆ ‘ಮಿಡ್-ಡೇ’ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮೃಣಾಲ್, ಆ ಸುದ್ದಿಯನ್ನು ನೇರವಾಗಿ ದೃಢಪಡಿಸಿಯೂ ಇಲ್ಲ, ಅಥವಾ ಅಲ್ಲಗಳೆಯಲೂ ಇಲ್ಲ. ಬದಲಿಗೆ, ‘ನಾನು ಕಳೆದ ಸುಮಾರು ಒಂಬತ್ತು ತಿಂಗಳಿಂದ ಯಾವುದೇ ಹೊಸ ಸಿನಿಮಾಗೂ ಸಹಿ ಹಾಕಿಲ್ಲ. ನನಗೆ ಸಾರ್ಥಕನಿಸುವ ಅರ್ಥಪೂರ್ಣ ಪಾತ್ರಕ್ಕಾಗಿ ಕಾಯುತ್ತಿದ್ದೇನೆ. ಯಾವುದೇ ಅಧಿಕೃತ ಘೋಷಣೆ ಇದ್ದರೂ ಅದು ನನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕವೇ ಹೊರಬರಲಿದೆ, ಆಗ ನಾನು ಖಂಡಿತವಾಗಿ ಮಾತನಾಡುತ್ತೇನೆ’ ಎಂದಿದ್ದಾರೆ.

ಕಳೆದ ಕೆಲವು ತಿಂಗಳಿಂದ ಹೊಸ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳದಿರಲು ಕಾರಣವೇನೆಂಬುದನ್ನು ವಿವರಿಸಿರುವ ಮೃಣಾಲ್ ಠಾಕೂರ್, ಕಥೆಗಳ ಆಯ್ಕೆಯಲ್ಲಿ ತಾವು ಎಷ್ಟು ಎಚ್ಚರಿಕೆ ವಹಿಸುತ್ತೇನೆ ಎಂಬುದನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ನಿರ್ಮಾಣವಾಗುತ್ತಿರುವ ಕಥೆಗಳು ತಮಗೆ ಸಂಪೂರ್ಣವಾಗಿ ಸರಿಹೊಂದುತ್ತಿಲ್ಲ ಎಂದು ಮೃಣಾಲ್ ಸ್ಪಷ್ಟಪಡಿಸಿದ್ದಾರೆ.

‘ಪ್ರತಿದಿನ ಸೆಟ್‌ನಲ್ಲಿ ನಾನು ಯಾಕಿದ್ದೇನೆ ಎಂದು ನಾನೇ ಪ್ರಶ್ನಿಸಿಕೊಳ್ಳಲು ಇಷ್ಟಪಡುವುದಿಲ್ಲ. ಒಂದು ಸಿನಿಮಾ ಸೆಟ್‌ನಲ್ಲಿ ನಾನು 120 ದಿನಗಳನ್ನು ಕಳೆಯಬೇಕಾಗುತ್ತದೆ. ಹೀಗಾಗಿ ಕೇವಲ ಜನಪ್ರಿಯತೆಗಾಗಿ ಅಲ್ಲದೆ, ಸೃಜನಶೀಲ ತೃಪ್ತಿಯನ್ನು ನೀಡುವ ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವುದು ನನ್ನ ಜವಾಬ್ದಾರಿ’ ಎಂದು ಮೃಣಾಲ್ ಠಾಕೂರ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಜೈಸ್ವಾಲ್ ಜೊತೆ ಡೇಟಿಂಗ್ ಎಂದವರಿಗೆ ಮೃಣಾಲ್ ಠಾಕೂರ್ ಖಡಕ್ ಉತ್ತರ

‘ನಾನು ಮಲಗುವಾಗ, ನಾನು ಕಳಪೆ ಕೆಲಸ ಮಾಡಿದೆ ಎಂದುಕೊಳ್ಳಲು ಇಷ್ಟಪಡುವುದಿಲ್ಲ. ಮುಂದಿನ 30 ವರ್ಷಗಳ ನಂತರವೂ ಜನರಿಗೆ ನೆನಪಿನಲ್ಲಿಳಿಯುವಂತಹ ಒಳ್ಳೆಯ ಕೆಲಸವನ್ನು ಮಾಡಲು ಬಯಸುತ್ತೇನೆ’ ಎಂದು ಮೃಣಾಲ್ ಠಾಕೂರ್ ಅವರು ತಿಳಿಸಿದ್ದಾರೆ. ಇಷ್ಟೆಲ್ಲ ಮಾತನಾಡಿರುವ ಅವರು ‘ರಾಕಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಅಥವಾ ಇಲ್ಲವಾ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Leave a Reply

Your email address will not be published. Required fields are marked *