15 ವರ್ಷದ ಹುಡುಗನ ಕೈಗೆ ಬಿಹಾರ ತಂಡ! ವೈಭವ್ ಸೂರ್ಯವಂಶಿ ಈಗ ನಾಯಕ
ಬಿಹಾರ ಕ್ರಿಕೆಟ್ ಮಂಡಳಿ ಮಹತ್ವದ ಹಾಗೂ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಕೇವಲ 15 ವರ್ಷದ ಯುವ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿಗೆ ಬಿಹಾರ ತಂಡದ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿದೆ.
ಮುಂಬರುವ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ವೈಭವ್ ಬಿಹಾರ ತಂಡವನ್ನು ಮುನ್ನಡೆಸಲಿದ್ದಾರೆ. ನವೆಂಬರ್ 14 ರಿಂದ ಡಿಸೆಂಬರ್ 6 ರವರೆಗೆ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಒಟ್ಟು 38 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
ಸಚಿನ್ ತೆಂಡೂಲ್ಕರ್ ವಿರೋಧವನ್ನೂ ಮೀರಿ ನಿರ್ಧಾರ!
ಇದು ಸುಲಭದ ನಿರ್ಧಾರವಲ್ಲ. ಇತ್ತೀಚೆಗಷ್ಟೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ವೈಭವ್ಗೆ ಇಷ್ಟು ಬೇಗ ನಾಯಕತ್ವ ನೀಡುವುದು ಸರಿಯಲ್ಲ ಎಂದು ಹೇಳಿದ್ದರು.
ದುಲೀಪ್ ಟ್ರೋಫಿಯಲ್ಲಿ ವೈಭವ್ರನ್ನು ಉಪನಾಯಕನನ್ನಾಗಿ ಮಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿನ್, “ಇದು ಆತುರದ ನಿರ್ಧಾರ. ಅವನಿಗೆ ಇನ್ನಷ್ಟು ರೆಡ್ ಬಾಲ್ ಪಂದ್ಯಗಳನ್ನು ಆಡಲು ಬಿಡಬೇಕು. ಹಂತ ಹಂತವಾಗಿ ಅನುಭವ ಪಡೆದುಕೊಂಡು ಮುಂದೆ ಸಾಗಲು ಬಿಡಬೇಕು” ಎಂದು ಅಭಿಪ್ರಾಯಪಟ್ಟಿದ್ದರು.
ಆದರೆ, ಬಿಹಾರ ಮಂಡಳಿ ಸಚಿನ್ ಮಾತನ್ನು ಬದಿಗಿಟ್ಟು ವೈಭವ್ ಮೇಲಿನ ನಂಬಿಕೆಯನ್ನು ತೋರಿಸಿದೆ.
ಅತ್ಯಂತ ಕಿರಿಯ ಟಿ20 ನಾಯಕನಾಗಿ ದಾಖಲೆ!
ವೈಭವ್ ಈಗ ಮತ್ತೊಂದು ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನಾಯಕನಾಗುವ ಮೂಲಕ ಪ್ರಮುಖ ಟಿ20 ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಅವರ ಹೆಸರಿಗೆ ಸೇರಲಿದೆ.
ಇದಕ್ಕೂ ಮೊದಲು ಕ್ರೊಯೇಷಿಯಾದ ಜೇಕ್ ವುಕೋಸಿಕ್ 17 ವರ್ಷ 311 ದಿನಗಳಲ್ಲಿ ನಾಯಕನಾಗಿದ್ದರು. ಅಫ್ಘಾನಿಸ್ತಾನದ ರಶೀದ್ ಖಾನ್ 19ನೇ ವಯಸ್ಸಿನಲ್ಲಿ ನಾಯಕನಾಗಿದ್ದರು. ಈಗ ಕೇವಲ 15ನೇ ವಯಸ್ಸಿನಲ್ಲೇ ವೈಭವ್ ಆ ದಾಖಲೆಯನ್ನು ಮುರಿಯಲಿದ್ದಾರೆ.
ಸದ್ಯಕ್ಕೆ ಟೂರ್ನಿಯ ಮೊದಲ ಎರಡು ಪಂದ್ಯಗಳಿಗೆ ಮಾತ್ರ ಬಿಹಾರ ತಂಡವನ್ನು ಪ್ರಕಟಿಸಲಾಗಿದೆ. ಸೂರಜ್ ಕಶ್ಯಪ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಬಿಹಾರ ತಂಡದ ಸಂಪೂರ್ಣ ಪಟ್ಟಿ:
ವೈಭವ್ ಸೂರ್ಯವಂಶಿ (ನಾಯಕ), ಸೂರಜ್ ಕಶ್ಯಪ್ (ಉಪನಾಯಕ), ಆಯುಷ್ ಲೋಹರುಕ (ವಿಕೆಟ್ ಕೀಪರ್), ಅನ್ಮೋಲ್ ಕುಮಾರ್ (ವಿಕೆಟ್ ಕೀಪರ್), ಅಲೋಕ್ ಕುಮಾರ್, ಅಲ್ತಮಶ್ ಅಶ್ರಫ್, ಪರಮ್ ಕುಮಾರ್ ಸಿಂಗ್, ರಿತ್ವಿಕ್ ರಾಜ್, ಮಯಾಂಕ್ ಕುಮಾರ್, ರಾಘವೇಂದ್ರ ಪ್ರತಾಪ್, ಆಶಿಶ್ ಕುಮಾರ್, ವಾಸುದೇವ್ ಪ್ರತಾಪ್, ನವಾಜ್ ಖಾನ್, ಹಿಮಾಂಶು ಸಿಂಗ್.
ವೈಭವ್ ಮಿಂಚ್ತಾರಾ?
ಪವರ್ಪ್ಲೇನಲ್ಲಿ ವೈಭವ್ ಬ್ಯಾಟಿಂಗ್ ನೋಡಿ ಈಗಾಗಲೇ ಮಿಚೆಲ್ ಸ್ಯಾಂಟ್ನರ್ ರಂತಹ ದಿಗ್ಗಜರು ಫಿದಾ ಆಗಿದ್ದಾರೆ. ಈಗ ಬ್ಯಾಟಿಂಗ್ ಜೊತೆಗೆ ನಾಯಕತ್ವದಲ್ಲೂ ಅವರು ಹೇಗೆ ಮಿಂಚುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.